SSLC ಪರೀಕ್ಷೆ : ಶಿಕ್ಷಣ ಸಚಿವರಿಂದ ವಿದ್ಯಾರ್ಥಿಗಳಿಗೆ ಬಹುಮುಖ್ಯ ಮಾಹಿತಿ ಎಸ್‌ಎಸ್‌ಎಲ್ ಸಿ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಸುರೇಶ್ ಕುಮಾರ್ ಬಹುಮುಖ್ಯ ಮಾಹಿತಿ ನೀಡಿದ್ದು, ಏಪ್ರಿಲ್ 29 ರಿಂದ ದೂರದರ್ಶನದ ಚಂದನ ವಾಹಿನಿಯಲ್ಲಿ ಪುನರ್ಮನನ ಕಾರ್ಯಕ್ರಮವನ್ನು ಆರಂಭಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ. ಈ ಕುರಿತು ಮಾಹಿತಿ ನೀಡಿರುವ ಸುರೇಶ್ ಕುಮಾರ್, ಏಪ್ರಿಲ್ 29 ರಿಂದ ಪ್ರತಿದಿನ ಮಧ್ಯಾಹ್ನ 3 ರಿಂದ 4.30 ರವರೆಗೆ ನಡೆಯಲಿದ್ದು, ನುರಿತ ಶಿಕ್ಷಕರು ವಿಷಯವಾರು ಬೋಧನೆ ಮಾಡಲಿದ್ದಾರೆ. ಮೊದಲ 16 ದಿನ ಪ್ರತಿ 45 ನಿಮಿಷಗಳ ಎರಡು ಅವಧಿಗಳಲ್ಲಿ ಗಣಿತ ಮತ್ತು ವಿಜ್ಞಾನ ವಿಷಯಗಳ ಬೋಧನಾ ತರಗತಿಗಳು ನಡೆಯಲಿದ್ದು, 17 ನೇ ದಿನ ಈ ಎರಡೂ ವಿಷಯಗಳ ಮಾದರಿ ಪ್ರಶ್ನೆ ಪತ್ರಿಕೆಗಳಿಗೆ ಉತ್ತರಿಸುವ ವಿಧಾನವನ್ನು ಶಿಕ್ಷಕರು ತಿಳಿಸಿಕೊಡಲಿದ್ದಾರೆ ಎಂದು ಹೇಳಿದರು. 18 ನೇ ದಿನದಿಂದ ಸಮಾಜ ವಿಜ್ಞಾನದ ತರಗತಿಗಳು 6 ದಿನಗಳ ಅವಧಿಗೆ ನಡೆಯಲಿದ್ದು, ನಂತರದ ದಿನಗಳಲ್ಲಿ ಕನ್ನಡ ಮತ್ತು ಆಂಗ್ಲಭಾಷಾ ವಿಷಯಗಳ ಬೋಧನೆಯನ್ನು ಸಹ ಮಾಡಲಾಗುತ್ತದೆ. ಪ್ರತಿ ವಿಷಯ ಬೋಧನೆಯ ಕೊನೆಯಲ್ಲಿ ಮಾದರಿ ಪ್ರಶ್ನೆ ಪತ್ರಿಕೆಗಳನ್ನು ಉತ್ತರಿಸುವ ವಿಧಾನ ಹೇಳಿಕೊಡಲಾಗುತ್ತದೆ ಎಂದು ಸುರೇಶ್ ಕುಮಾರ್ ತಿಳಿಸಿದ್ದಾರೆ