#ಸಿರಾ_ತಾಲೂಕಿನ_ಸಿರಿವಂತಿಕೆಯ_ಇತಿಹಾಸ

#ತಾಲೂಕಿನ_ಪರಿಚಯ
ತುಮಕೂರು ಜಿಲ್ಲೆಯ ವ್ಯಾಪ್ತಿಗೆ ಒಳಪಡುವ ತಾಲೂಕು ಸಿರಾ. ಸಿರಾ ತಾಲ್ಲೂಕಿನ ವಿಸ್ತೀರ್ಣ 1549 ಚದರ ಕಿಲೋ ಮೀಟರ್  ಜಿಲ್ಲೆಯ ಹತ್ತು ತಾಲ್ಲೂಕುಗಳಿಗಿಂತ, ಸಿರಾ ತಗ್ಗು ಪ್ರದೇಶವಾಗಿದ್ದು, ಸಮುದ್ರ ಮಟ್ಟಕ್ಕಿಂತ 661 ಮೀಟರ್ ಎತ್ತರದಲ್ಲಿದೆ ಹಾಗೂ ಉತ್ತಮ ವಾತಾವರಣ ಹೊಂದಿದೆ. ಇದು ದಿನಾಂಕ 31/12/2006 ರಂದು, ಸಿರಾ ಪುರಸಭೆಯೂ ನಗರಸಭೆಯಾಗಿ ಪರಿವರ್ತನೆಯಾಗಿದೆ.
ಹಿಂದೆ ಸಿರಿವಂತಿಕೆಯ ನಾಡಾಗಿತ್ತು, ಪಾಳೆಗಾರರ ಬೀಡಾಗಿತ್ತು. ತಾಲೂಕಿನಲ್ಲಿ ಅನೇಕ ಐತಿಹಾಸಿಕ ಘಟನೆಗಳು ನಡೆದಿದ್ದು ಇತಿಹಾಸದ ಪುಟಗಳಲ್ಲಿ ದಾಖಲಾಗಿದೆ. ತಾಲ್ಲೂಕಿನಲ್ಲಿ ಪ್ರಸಿದ್ಧ ಪ್ರವಾಸಿ ತಾಣಗಳಿದ್ದು ಅವುಗಳು ಸಿರಾ ಕೋಟೆ, ಬರಗೂರು ಆಂಜನೇಯಸ್ವಾಮಿ ದೇವಸ್ಥಾನ, ಮದ್ದಕ್ಕನಹಳ್ಳಿ ಗ್ರಾನೈಟ್ ಕ್ವಾರಿ, ಮಲ್ಲಿಕ್ ರೆಹಾನ್ ದರ್ಗಾ, ಜಾಮೀಯಾ ಮಸೀದಿ, ಶ್ರೀ ಗುರುಗುಂಡ ಬ್ರಹ್ಮೇಶ್ವರ ಸ್ವಾಮಿ ಸ್ಪಟಿಕಪುರಿ ಕ್ಷೇತ್ರ, ಸೀಬಿ ನರಸಿಂಹ ಸ್ವಾಮಿ ಕ್ಷೇತ್ರ, ಕಗ್ಗಲಡು ಪಕ್ಷಿಧಾಮ ಮತ್ತು ಟಿಪ್ಪು ಸುಲ್ತಾನ್ ತಾಯಿಯ ಸಮಾಧಿ ಮುಂತಾದವುಗಳಿವೆ ಬನ್ನಿ ಇವುಗಳ ಇತಿಹಾಸದ ಬಗ್ಗೆ ತಿಳಿಯೋಣ.

#ಇತಿಹಾಸಗಳು
#ಸಿರಾ_ಕೋಟೆ
ಮಧ್ಯ ಹಳೆಯ ಶಿಲಾಯುಗದ ಇತಿಹಾಸವನ್ನು ಹೊಂದಿರುವ ಸಿರಾ ಗಂಗರು, ರಾಷ್ಟ್ರಕೂಟರು, ಕಲ್ಯಾಣಿ ಚಾಲುಕ್ಯರು, ನೊಳಂಬರು, ಪಲ್ಲವರು, ಚೋಳರು, ಹೊಯ್ಸಳರು, ವಿಜಯನಗರದ ಅರಸರು, ಆದಿಲ್ ಷಾಹಿಗಳು, ಬಿಜಾಪುರದ ಸುಲ್ತಾನರು, ಮೊಗಲರು, ಮರಾಠರು, ಮೈಸೂರು ಅರಸರು, ಹೈದರಾಲಿ ಮತ್ತು ಟಿಪ್ಪು ಸುಲ್ತಾನ್, ಬ್ರಿಟಿಷರು, ಅನೇಕ ಪಾಳೆಗಾರರು, ಮುಂತಾದ ರಾಜ, ಸಾಮಂತ ರಾಜರ, ರಾಜ ಮನೆತನಗಳು ಆಳ್ವಿಕೆ ಮಾಡಿವೆ. ವಿಜಯನಗರ ಸಾಮ್ರಾಜ್ಯದ ಸಾಮಂತರಾಗಿದ್ದ ಹರತಿ ತಿಪ್ಪನಾಯಕರ ವಂಶಸ್ಥರಾದ ಕರೇರಂಗಪ್ಪನಾಯಕ(ಕಸ್ತೂರಿ ರಂಗಪ್ಪನಾಯಕ) ಗೊಲ್ಲರ ದೇವಣ್ಣ ಮತ್ತು ಸಿರಿಯಣ್ಣ ಕೋಟೆ ನಿರ್ಮಾಣ ಮಾಡಿಸಿ ಸಿರಿಯನ್ ಕೋಟೆ, ಸಿರಿಯ ಕೋಟೆ, ಸಿರಾ ಕೋಟೆ ಎಂಬ ಹೆಸರು ಪಡೆದಿದೆ.
ಒಳಾಂಗಣದಲ್ಲಿ ಹುಲಿಮುಖದ ಹೆಬ್ಬಾಗಿಲು, ಎರಡನೆಯ ದಿಡ್ಡಿಬಾಗಿಲು ಹಿಂದೂ ಶೈಲಿಯ ಕೆತ್ತನೆಯನ್ನು ಹೊಂದಿದೆ. ಪ್ರವೇಶ ದ್ವಾರವು ಅಷ್ಟ ಕೋನಾಕೃತಿಯಲ್ಲಿದ್ದು, ಕ್ರಿ.ಶ. 1638 ರಲ್ಲಿ ಪೌಜ್ ದಾರ್ ಮಲ್ಲಿಕ್ ರೆಹಾನನ ಕಾಲದಲ್ಲಿ ಕೋಟೆ ಪೂರ್ಣಗೊಂಡು ಪೇಟೆಯ ನಿರ್ಮಾಣವಾಗಿದೆ. ದಿಲಾವರ್ ಖಾನ್ ನ ಆಳ್ವಿಕೆಯ ಕಾಲದಲ್ಲಿ ಅವನು ವಾಸವಾಗಿದ್ದ ಅರಮನೆ ಮತ್ತು ಆತ ನಿರ್ಮಾಣ ಮಾಡಿದ್ದ ಖಾನ್ ಭಾಗ್ ನ ಸೌಂದರ್ಯಕ್ಕೆ ಮಾರುಹೋಗಿ ಹೈದರನು ಶ್ರೀರಂಗಪಟ್ಟಣ ಹಾಗೂ ಬೆಂಗಳೂರಿನಲ್ಲಿ ಅದೇ ಮಾದರಿಯ ಅರಮನೆಗಳನ್ನು ಕಟ್ಟಿಸಿರುವುದಾಗಿಯೂ ಬೆಂಗಳೂರಿನ ಲಾಲ್ ಬಾಗ್, ಖಾನ್ ಭಾಗ್ ನಿಂದ ಪ್ರೇರಣೆಗೊಂಡು ನಿರ್ಮಿಸಲಾಗಿದೆ. ಕೋಟೆಗಳು ಸಾಮಾನ್ಯವಾಗಿ ಬೆಟ್ಟದಲ್ಲಿ ಅಥವಾ ಬೆಟ್ಟಕ್ಕೆ ಹೊಂದಿಕೊಂಡಂತೆ ಇರುತ್ತದೆ. ಸಿರಾದ ಕೋಟೆ ನೆಲದ ಮೇಲೆ ಇರುವುದೊಂದು ವಿಶೇಷ. ಇಂತಹ ನೆಲದುರ್ಗಗಳು ವಿರಳ, ಈ ನೆಲದುರ್ಗ(ಕೋಟೆ) ಬೆಂಗಳೂರಿನ ನೆಲದುರ್ಗಕ್ಕೆ(ಕೋಟೆಗೆ) ಮಾದರಿಯಾಗಿದೆ. ದಿನಾಂಕ 15/01.2009 ರಂದು ಶಿರಾ ಕೋಟೆಯನ್ನು ರಾಜ್ಯ ಐತಿಹಾಸಿಕ ಪ್ರವಾಸಿ ಕೋಟೆ ಮತ್ತು ಸಂರಕ್ಷಣಾ ಕೋಟೆ ಎಂದು ಘೋಷಿಸಲಾಗಿದೆ‌.

#ಸೀಬಿ_ನರಸಿಂಹಸ್ವಾಮಿ_ಕ್ಷೇತ್ರ
ಸೀಬಿ ನರಸಿಂಹಸ್ವಾಮಿ ದೇವಸ್ಥಾನ ಶಿರಾ ತಾಲ್ಲೂಕಿನಲ್ಲಿಯೇ ಇದೆ. ಟಿಪ್ಪು ಸುಲ್ತಾನ್ ಆಡಿಳಿತಾವಧಿಯಲ್ಲಿ ಟಿಪ್ಪು ಸುಲ್ತಾನ್ ನ ಆಸ್ಥಾನದಲ್ಲಿ ದಿವಾನರಾಗಿದ್ದ ಕಛೇರಿ ಕೃಷ್ಣಪ್ಪನವರ ಮೂವರು ಮಕ್ಕಳು ಕಟ್ಟಿಸಿದ್ದಾರೆ. ಶ್ರೀರಂಗಪಟ್ಟಣದಲ್ಲಿ ಒಂದು ಸಾವಿರ ಎಕರೆ ಜಮೀನನ್ನು ದೇವಸ್ಥಾನಕ್ಕೆ ಟಿಪ್ಪು ದಾನ ಕೊಟ್ಟಿದ್ದಾನೆ. ನರಸಿಂಹ ಸ್ವಾಮಿ ಕ್ಷೇತ್ರದ ಮೂಲ ದೇವರು ಸಾಲಿಗ್ರಾಮದ್ದಾಗಿದ್ದು ವರ್ಷದಿಂದ ವರ್ಷಕ್ಕೆ ಬೆಳೆಯುತ್ತಿದೆ ಎಂದು ದೇವಸ್ಥಾನದ ಆಡಳಿತ ಮಂಡಳಿ ಹೇಳುತ್ತಿದೆ.

#ಬರಗೂರು_ಆಂಜನೇಯಸ್ವಾಮಿ_ದೇವಸ್ಥಾನ
ತುಮಕೂರಿನಿಂದ 77ಕಿಲೋಮೀಟರ್ ಇದ್ದು 
ಶಿರಾದಿಂದ 25 ಕಿಲೋಮೀಟರ್ ದೂರದಲ್ಲಿರುವ ಬರಗೂರಿನಲ್ಲಿ 5 ಅಡಿ ಉದ್ದ, 4 ಅಡಿ ಅಗಲದ ಬಂಡೆಯಲ್ಲಿ ವೀರಾಂಜನೇಯನ ವಿಗ್ರಹ ಕೆತ್ತನೆ ಮನಮೋಹಕವಾಗಿದೆ. ಆಂಜನೇಯನು ಕೈ ಎತ್ತಿ ಕಠಾರಿ ಹಿಡಿದಿರುವುದರಿಂದ ಇದು ವಿಜಯನಗರದ ಕಾಲದ್ದಾಗಿದೆ ಎಂದು ಸ್ಪಷ್ಟವಾಗಿ ಹೇಳಬಹುದಾಗಿದೆ. ಪೂರ್ಣ ದೇವಸ್ಥಾನ ಹಾಗೂ ಮೇಲ್ಛಾವಣಿ ಬಂಡೆಗಲ್ಲಿನಿಂದ ಮಾಡಲ್ಪಟ್ಟಿದ್ದು, ವಿಮಾನ ಗೋಪುರ ವಿಜಯನಗರದ ಕೈ ಚಳಕಕ್ಕೆ ಎತ್ತಿ ಹಿಡಿದ ಕನ್ನಡಿಯಾಗಿದ್ದು, ಅದು ಭಗ್ನವಾಗಿದೆ. ದೇವಸ್ಥಾನದ ಅರ್ಧ ಮಂಟಪದ ಮೇಲ್ಭಾಗದಲ್ಲಿ ದೇವಕೋಷ್ಠಕಗಳಿದ್ದು, ನಾಲ್ಕು ಮೂಲೆಗಳಲ್ಲಿಯೂ ಕರ್ಣ ಕೂಟಗಳಿವೆ.
ಬರಗೂರಿನಲ್ಲಿ ನೊಳಂಬರ ಅರಸ ಮಹೇಂದ್ರ ಬಾಣರನ್ನು ಗೆದ್ದ ನೆನಪಿಗಾಗಿ ಈಶ್ವರ ದೇವಾಲಯವನ್ನು ನಿರ್ಮಿಸಿದ್ದಾನೆ. ಅದರ ಅವಶೇಷಗಳನ್ನು ಗಮನಿಸಬಹುದು. ಚೋಳರ ಆಡಳಿತ ಕಾಲದಲ್ಲಿ ಮಹಾಘಟಕವಾಗಿದ್ದ ಬರಗೂರು, ಇತಿಹಾಸದಲ್ಲಿ ತನ್ನದೇ ಛಾಪು ಮೂಡಿಸಿದೆ.

#ರಿಹಾನ್_ದರ್ಗಾ
ತುಮಕೂರಿನಿಂದ ಸಿರಾಗೆ ಹೋಗುವಾಗ ಸಿರಾ ಪಟ್ಟಣದ ಪ್ರವೇಶ ಸ್ಥಳದಲ್ಲೇ ಒಂದು ದರ್ಗಾಯಿದೆ ಈ ದರ್ಗಾವನ್ನು 1637 ರಿಂದ 1651 ರವರೆಗೆ ಸಿರಾದ ಮಲ್ಲಿಕ್ ರಿಹಾನ್ ಕಟ್ಟಿಸಿದ್ದನು.
ಈ ದರ್ಗಾದ ವಿಶೇಷವೆಂದರೆ ಇಲ್ಲಿಗೆ ಹಿಂದೂ – ಮುಸ್ಲಿಮರಿಬ್ಬರೂ ಬಂದು ಪ್ರಾರ್ಥನೆ ಸಲ್ಲಿಸುತ್ತಾರೆ. ಇದು ಹಿಂದೂ ಮುಸ್ಲಿಂ ಭಾವೈಕ್ಯತೆಯ ಪ್ರತೀಕವಾಗಿದೆ. ಇಂದಿಗೂ ಅಚ್ಚುಕಟ್ಟಾಗಿ ಸೊಗಸಾಗಿದೆ.

#ಕಗ್ಗಲಡು_ಪಕ್ಷಿಧಾಮ
ಇದೊಂದು  ಪಕ್ಷಿಧಾಮವಾಗಿದ್ದು. ಪ್ರತಿವರ್ಷ ಡಿಸೆಂಬರ್ ಅಥವಾ ಜನವರಿ ಮೊದಲ ವಾರದಲ್ಲಿ ಇಲ್ಲಿಗೆ ಪಕ್ಷಿಗಳೂ ಆಗಮಿಸುತ್ತವೆ. ಕೆಲವು ಬಾರಿ ಮಾರ್ಚ್ ತಿಂಗಳಲ್ಲಿ ಆಗಮಿಸುತ್ತವೆ. ಪ್ರಾರಂಭದಲ್ಲಿ ಕೆಲ ಪಕ್ಷಿಗಳೂ ಮಾತ್ರ ಬಂದು ಹೋಗಿ ನಂತರ ಹೆಣ್ಣೂ ಪಕ್ಷಿಗಳ ಜೊತೆಯಲ್ಲಿ ಬಂದು ಸಂತಾನಾಭಿವೃದ್ದಿಗಾಗಿ ಗೂಡು ಕಟ್ಟಿ ಕಗ್ಗಲಡು ಗ್ರಾಮದ ಹುಣಸೇಮರಗಳಲ್ಲಿ ನೆಲೆಸುತ್ತವೆ. ಶ್ರೀಲಂಕಾ, ಮಲೇಶಿಯಾ, ಬರ್ಮಾ, ಬಂಗ್ಲಾ, ನ್ಯೂಜಿಲ್ಯಾಂಡ್, ಆಸ್ಟ್ರೇಲಿಯಾದಿಂದ ವಿಶ್ವದ ವಿವಿಧ ಪ್ರಭೇದಗಳಾದ “ಗ್ರೇಹಾರನ್, ಪೇಯಿಂಟೆಡ್ ಸ್ಪಾರ್ಕ್, ಬ್ರಾಹ್ಮಿನಿ ಡಕ್, ಪಿನ್ ಟೈಲ್ ಡಕ್, ಡ್ಯಾಬ್ ಚಿಕ್, ಸ್ಪೂನ್ ಬಿಲ್, ಮತ್ತು ಐಬಿಸ್” ಜಾತಿಯ ಪಕ್ಷಿಗಳು ಇಲ್ಲಿಗೆ ವಲಸೆ ಬಂದು ಸುಮಾರು 6 ತಿಂಗಳ ಕಾಲ ನೆಲೆಸಿರುತ್ತವೆ. ಸಂತಾನಾಭಿವೃದ್ದಿ ಪೂರೈಸಿಕೊಂಡು ಮರಿಗಳ ರೆಕ್ಕೆ ಬಲಿತು ಹಾರಲು ಕಲಿತ ನಂತರ ತಮ್ಮ ತಮ್ಮ ಸ್ವದೇಶಗಳಿಗೆ ಹಿಂದಿರುಗುತ್ತವೆ. ಸುಮರು 20 ವರ್ಷಗಳಿಂದಲೂ ಕಗ್ಗಲಡು ಸುಂದರ ಪಕ್ಷಿಧಾಮವಾಗಿದೆ. ಊರೊಳಗಿನ ಹಾಗೂ ಆಸುಪಾಸಿನ ಹುಣಸೇಮರಗಳಲ್ಲಿ ಇವು ಗೂಡು ಕಟ್ಟಿಕೊಂಡು ವಾಸಿಸುತ್ತವೆ. ಹೆಣ್ಣು ಹಕ್ಕಿ ಮೊಟ್ಟೆ ಇಟ್ಟು ಕಾವು ಕೊಟ್ಟು ಮತಿಗಳ ಸಂರಕ್ಷಣೆಗೆ ತೊಡಗಿದಾಗ ಗಂಡು ಹಕ್ಕಿಯು ಆಹಾರ ಪೂರೈಕೆ ಮಾಡುತ್ತದೆ. ಗಂಡು ಹಕ್ಕಿ ಗೂಡಿನಲ್ಲಿನ ಮರಿಗಳ ಸಂರಕ್ಷಣೆಯಲ್ಲಿ ಕ್ರಿಯಾಶೀಲವಾದಾಗ ಹೆಣ್ಣು ಹಕ್ಕಿ ಆಹಾರಕ್ಕೆ ಹೋಗುತ್ತದೆ. ಸುಮಾರು 21 ದಿನಗಳಿಗೆ ಮೊಟ್ಟೆ ಒಡೆದು ಮರಿಗಳು ಹೊರಬರುತ್ತವೆ. ಕಗ್ಗಲಡುವಿನ ಕೆರೆ ಶಿರಾದ ಚಿಕ್ಕಕೆರೆ, ದೊಡ್ಡಕೆರೆ, ಹಿರಿಯೂರು ತಾಲ್ಲೂಕಿನ ಗಾಯಿತ್ರಿ ಜಲಾಶಯ, ವಾಣಿವಿಲಾಸ ಸಾಗರ, ಹಾಗೂ ಶಿರಾ ತಾಲ್ಲೂಕಿನ ಇತರೆ ಕೆರೆಗಳಿಗೆ, ಸುಮಾರು  50 ಕಿಲೋಮೀಟರ್ ದೂರದವರೆಗೂ ಹಾರಿ ಆಹಾರ ಸಂಗ್ರಹಿಸುತ್ತವೆ.

#ಶ್ರೀಗುರುಗುಂಡ_ಬ್ರಹ್ಮೇಶ್ವರ_ಸ್ವಾಮಿ 
#ಸ್ಪಟಿಕಪುರಿ_ಕ್ಷೇತ್ರ_ಪಟ್ಟನಾಯಕನಹಳ್ಳಿ
ಇದು ಸಿರಾದಿಂದ 12 ಕಿ.ಮೀ ಇದೆ
ತುಮಕೂರಿನಿಂದ 62 ಕಿ.ಮೀ 180ವರ್ಷಗಳ ಇತಿಹಾಸವಿರುವ ಈ ಕ್ಷೇತ್ರವು 
ಕ್ರಿ.ಪೂ.1835 ರಲ್ಲಿ ಸ್ಥಾಪಿಸಲಾಗಿದೆ. 1ನೇ ನಂಜವಧೂತರಿಂದ ಸ್ಥಾಪಿಸಲ್ಪಟ್ಟಿದೆ. ಪ್ರಸಿದ್ದ ಶಿವ ದೇವಾಲಯ ಈ ಕ್ಷೇತ್ರದ ಹಿರಿಮೆ. 12,13ನೇ ಶತಮಾನದ ಈ ದೇಗುಲ ಹೊಯ್ಸಳರ ಕಾಲದ್ದೆಂದು ಗುರುತಿಸಲ್ಪಟ್ಟಿದೆ. ಈ ದೇವಾಲಯದ ಶಿವಲಿಂಗ ಹಾಗೂ ಶಿವಲಿಂಗದ ಎದುರಿನ ನಂದಿಯ ವಿಗ್ರಹ ನಯನ ಮನೋಹರವಾಗಿದೆ. ಸಾಲಿಗ್ರಾಮ ಸಹಿತ ನವಗ್ರಹಗಳು, ವಿನಾಯಕ, ಸೂರ್ಯಾನಾರಾಯಣ, ಲಕ್ಷ್ಮೀನಾರಾಯಣ, ಭಕ್ತಾಂಜನೇಯ, ಶ್ರೀ ದತ್ತಾತ್ರೇಯ ಮುಂತಾದ ವಿಗ್ರಹಗಳು ಶಿಲ್ಪಕಲೆ ಮನೋಹರವಾಗಿದೆ.
ಪ್ರಸ್ತುತ ಶ್ರೀ ನಂಜಾವಧೂತ ಸ್ವಾಮೀಜಿಯವರ ನೇತೃತ್ವದಲ್ಲಿ ಒಂದು ಪ್ರವಾಸಿ, ಶೈಕ್ಷಣಿಕ ಹಾಗೂ ಧಾರ್ಮಿಕ ಕ್ಷೇತ್ರವಾಗಿ ಪ್ರಖ್ಯಾತವಾಗಿದೆ.

#ಜಾಮಿಯಾ_ಮಸೀದಿ
ಕ್ರಿ.ಶ.1686 ರಲ್ಲಿ ಮೊಘಲರ ಸುಬೇದಾರ್ ಆಗಿ ನೇಮಕಗೊಂಡಿದ್ದ ಖಾಸಿಂಖಾನನ ಕಾಲದಲ್ಲಿ ಷೇಕ್ ಫರೀದ್ ರವರಿಂದ ಜಾಮೀಯಾ ಮಸೀದಿಯನ್ನು ನಿರ್ಮಾಣ ಮಾಡಲಾಯಿತು ಇದು ದೆಹಲಿಯ ಜಾಮಿಯಾ ಮಸೀದಿಯ ಹಚ್ಚು ಎಂದು ಕರೆಯಲಾಗಿದೆ. ಇದಕ್ಕೆ ಯಾವುದೇ ಹಾನಿ ಉಂಟಾಗದೆ ಸುವ್ಯವಸ್ಥಿತವಾಗಿದೆ. ನವೆಂಬರ್ 1958 ರಲ್ಲಿ ಮಲ್ಲಿಕ್ ರೆಹಾ ದರ್ಗಾ ಮತ್ತು ಜಾಮಿಯಾ ಮಸೀದಿಯನ್ನು ರಾಷ್ಟ್ರೀಯ ಸ್ಮಾರಕಗಳಾಗಿ ಭಾರತೀಯ ಸರ್ಕಾರದ ಪುರಾತತ್ವ ಇಲಾಖೆ ಘೋಷಿಸಿದೆ.

#ಪುರಾತನ_ಕಾಲದ_ವಿಗ್ರಹಗಳು
ಶಿರಾದಲ್ಲಿ ಹಳೆಯ ಪುರಾತನ ಕಾಲದ ದೇವಸ್ಥಾನದ ವಿಗ್ರಹಗಳು ಕಲ್ಲು ಕಂಬಗಳು ದೊರಕಿವೆ.
ಶಿರಾ ಪಟ್ಟಣದ ದೊಡ್ಡಕೆರೆಯಲ್ಲಿ ಹೂಳು ತೆಗೆಯುವ ಸಂದರ್ಭದಲ್ಲಿ ಪುರಾತನ ಕಾಲದ ವಿಗ್ರಹಗಳು ಪತ್ತೆಯಾಗಿವೆ.
ದೊಡ್ಡಕೆರೆಯಲ್ಲಿ ಕಳೆದ ಒಂದು ವಾರದಿಂದ ಹೂಳು ತೆಗೆಯುತ್ತಿದ್ದು, ವಿಷ್ಣು, ವೀರಭದ್ರಸ್ವಾಮಿ, ದ್ವಾರಪಾಲಕರಾದ ಜಯ, ವಿಜಯ ಹಾಗೂ ಮಂಟಪದ ಕಂಬಗಳು ಸೇರಿ 28ಕ್ಕೂ ಕಲ್ಲಿನ ವಿಗ್ರಹಗಳು ದೊರೆತಿವೆ. ಈ ಕೆರೆಯಲ್ಲಿ ಶಿರಾ ಕೋಟೆ ಕಟ್ಟಿಸಿದ ಕಸ್ತೂರಿ ರಂಗಪ್ಪ ನಾಯಕನೆ ಈ ದೇವಾಲಯವನ್ನು ಕಟ್ಟಿಸಿರಬೇಕೆಂದು ಪುರಾತತ್ವ ಇಲಾಖೆಯವರು ವರದಿ ನೀಡಿದ್ದಾರೆ. ಈ ದೇವಸ್ಥಾನ ತಗ್ಗು ಪ್ರದೇಶದಲ್ಲಿದ್ದರಿಂದ ನೀರು ತುಂಬಿಕೊಂಡು ಆನಂತರ ಕೆರೆಯಾಗಿದೆ ಎಂದು ವಿಶ್ಲೇಷಿಸದರು.

#ಸೃಷ್ಟಿಯ_ವಿಚಿತ್ರ_ದೊಡ್ಡ_ಆಲದ_ಮರ_ಮತ್ತು_101ಸುಳಿಗಳಿರುವ_ಈಚಲುಮರ
ತೊಗರಗುಂಟೆ ಸಂರಕ್ಷಿತ ಆಲದಮರ ಸಿರಾದಿಂದ 15 ಕಿಲೋಮೀಟರ್ ಇದ್ದು ತುಮಕೂರಿನಿಂದ 65ಕಿಲೋಮೀಟರ್ ಇದೆ ಹಾಗೂ 
ತಾವರೆಕೆರೆಯ 101 ಸುಳೀ ಈಚಲ ಮರ
ಸುಮಾರು 4 ಎಕರೆ ವಿಸ್ತೀರ್ಣದಲ್ಲಿ ಹಬ್ಬಿರುವ ಆಲದ ಮರವನ್ನು ಶ್ರೀಅಮ್ಮಾಜಿ ದೇವಸ್ಥಾನದ ಟ್ರಸ್ಟ್ ವತಿಯಿಂದ ಸಂರಕ್ಷಿಸಲಾಗಿದೆ. ಒಂದು ದಿನದ ಪ್ರವಾಸಕ್ಕೆ ಹೇಳಿಮಾಡಿಸಿದಂತಿದೆ.
ಇಲ್ಲಿನ ಒಂದು ಪುರಾಣ ಪ್ರಸಿದ್ಧ ಪ್ರತೀತಿ ಒಂದಿದೆ 
ಏಳು ಮಂದಿ ಅಕ್ಕತಂಗಿಯರಾದ ಏಳ್ ಮಂದಕ್ಕನವರು, ವರ್ಷಕ್ಕೊಮ್ಮೆ ಬಂದು ವಿಶ್ರಾಂತಿ ಪಡೆದುಕೊಳ್ಳುತ್ತಾರೆ ಎಂದು ಪ್ರತೀತಿ.
101 ಸುಳಿ ಈಚಲ ಮರಕ್ಕೆ ಪ್ರದಕ್ಷಿಣೆಹಾಕಿ ಅದರ ಬಳೀ ಇರುವ ಬೋರ್ ವೆಲ್ ನೀರು ಕುಡಿಯುವುದರಿಂದ ಚರ್ಮ ಗಂಟಲು ಕೂದಲು ಉದುರುವ ಖಾಯಿಲೆಗಳು ಗುಣವಾಗುತ್ತವೆ ಎಂಬ ನಂಬಿಕೆ, ವಾಡಿಕೆ ಇದೆ.

#ಶಿರಾ_ತಾಲ್ಲೂಕಿನ_ಸ್ವಾತಂತ್ರ್ಯ_ಹೋರಾಟಗಾರು
#ಗೋವಿಂದಪ್ಪ:
ಹುಣಸೇಹಳ್ಳಿ ವ್ಯವಸಾಯಗಾರರಾದ ಸಣ್ಣ ವೆಂಕಟಪ್ಪನವರ ಮಕ್ಕಳಾದ ಇವರು ಅರಣ್ಯ ಸತ್ಯಾಗ್ರಹದಲ್ಲಿ ಭಾಗವಹಿಸಿದ್ದಕ್ಕಾಗಿ 6 ತಿಂಗಳ ಕಠಿಣ ಸಜಾ ಅನುಭವಿಸಿ, 50ರೂ. ಜುಲ್ಮಾನೆ ಕೊಡದೆ ಮತ್ತೆ 1 ತಿಂಗಳು ಕಠಿಣ ಶಿಕ್ಷೆ ಅನುಭವಿಸಿದರು.

#ಕೆಂಚಪ್ಪ:
ಶಿರಾ ಟೌನ್ ಮಂಡಿ ವ್ಯಾಪಾರಿಗಳಾದ ಬೋಪಣ್ಣನವರ ಮಕ್ಕಳು, ವ್ಯವಸಾಯಗಾರರಾದ ಇವರು ಅರಣ್ಯ ಸತ್ಯಾಗ್ರಹದಲ್ಲಿ ಪಾಲ್ಗೊಂಡು ಹತ್ತೂವರೆ ತಿಂಗಳ ಕಠಿಣ ಸಜಾ ಅನುಭವಿಸಿ ನಂತರ 225ರೂ. ದಂಡ ಕೊಡದೆ ಮತ್ತೆ ಒಂದು ತಿಂಗಳು 29 ದಿನ ಜೈಲು ಅನುಭವಿಸಿದರು.
#ಧನ್ಯವಾದಗಳು