ವಿಶಾಖಪಟ್ಟಣಂ, ಮೇ 7: ದೇಶ ಕೊರೊನಾ ಹಾವಳಿಯಿಂದ ತತ್ತರಿಸಿರುವ ನಡುವೆಯೇ ಆಂಧ್ರಪ್ರದೇಶದ ವಿಶಾಕಪಟ್ಟಣದಲ್ಲಿ ವಿಷಕಾರಿ ಅನಿಲ ಸೋರಿಕೆಯಿಂದ ಮತ್ತೊಂದು ಆಘಾತ ಎದುರಾಗಿದೆ. ವಿಶಾಖಪಟ್ಟಣಂ ಹೊರವಲಯದ ಆರ್ ಆರ್ ವೆಂಕಟಾಪುರಂ ಬಳಿಯ ಎಲ್‌ ಜಿ ಪಾಲಿಮರ್ಸ್ ಎಂಬ ಎಂಎನ್‌ಸಿ ಕಂಪೆನಿಯ ಕಾರ್ಖಾನೆಯಲ್ಲಿ ಮಹಾ ದುರಂತ ಸಂಭವಿಸಿದ್ದು, ಘಟನೆಯಲ್ಲಿ ಇದುವರೆಗೆ 10 ಜನ ಮೃತಪಟ್ಟಿದ್ದು, 800 ಕ್ಕೂ ಹೆಚ್ಚು ಜನ ತೀವ್ರ ಅಸ್ವಸ್ಥಗೊಂಡು ಆಸ್ಪತ್ರೆಯಲ್ಲಿ ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದಾರೆ. 5000 ಜನಕ್ಕೆ ನೇರವಾಗಿ ವಿಷಾನಿಲ ತಟ್ಟಿದೆ. ಸ್ಥಳಕ್ಕೆ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ ಆಗಮಿಸಿದ್ದು, ಬಿರುಸಿನ ಕಾರ್ಯಾಚರಣೆ ನಡೆಸಿದೆ. ಅನಿಲ ಸೋರಿಕೆಯ ಸುಮಾರು ಎಂಟು ಕಿಲೋ ಮೀಟರ್ ವಿಸ್ತಾರವನ್ನು ಸೀಲ್‌ಡೌನ್ ಮಾಡಲಾಗುತ್ತಿದೆ. ಇಡೀ ದೇಶವನ್ನು ಬೆಚ್ಚಿ ಬಿಳ್ಳಿಸಿರುವ ಎಲ್‌ಜಿ ಪಾಲಿಮರ್ಸ್‌ ಘಟಕದ ವಿಷಾನಿಲ (ಸ್ಟಿರಿನ್ ಗ್ಯಾಸ್) ಸೋರಿಕೆಗೆ ಕಾರಣ ಏನು ಎಂಬ ಬಗ್ಗೆ ವ್ಯಾಪಕ ಚರ್ಚೆ ಆಗುತ್ತಿದೆ. ಎಲ್‌ಜಿ ಪಾಲಿಮರ್ಸ್‌ ಘಟಕದ ವಿಷಾನಿಲ ಸೋರಿಕೆಗೆ ಬಗ್ಗೆ ಆಂಧ್ರಪ್ರದೇಶ ಸರ್ಕಾರ ತನಿಖೆ ಆರಂಭಿಸಿದೆ. ಪ್ಯಾಕ್ಟರಿಯ 5 ಕಿಲೋ ಮೀಟರ್ ವ್ಯಾಪ್ತಿಯಲ್ಲಿ ವಿಷಾನಿಲ ಹರಡಿದೆ. ಈ ವಿಷಾನಿಲ ಹರಡಲು ನಿಖರ ಕಾರಣ ಏನು ಎಂಬ ಬಗ್ಗೆ ಗೊಂದಲಗಳು ಮೂಡಿದ್ದು, ಸದ್ಯದ ಪ್ರಾಥಮಿಕ ವರದಿಗಳ ಪ್ರಕಾರ ಇದು ಕಾರ್ಖಾನೆಯ ಸಿಬ್ಬಂದಿ ನಿರ್ಲಕ್ಷ್ಯದಿಂದ ಆದ ದುರಂತ ಎಂದು ಹೇಳಲಾಗುತ್ತಿದೆ. ಬೆಳಗಿನ ಜಾವ 3 ಗಂಟೆಯ ಸುಮಾರು ಪ್ಯಾಕ್ಟರಿಯಲ್ಲಿ ವಿಷಾನಿಲ ಸೋರಿಕೆ ಪ್ರಾರಂಭವಾಗಿದೆ. ಅನಿಲ ಸೋರಿಕೆಯನ್ನು ತಡೆಗಟ್ಟುವ ಸಿಬ್ಬಂದಿ ಮೈ ಮರೆತಿದ್ದೆ ಘಟನೆಗೆ ಕಾರಣ ಎಂದು ಮೇಲ್ನೋಟಕ್ಕೆ ಕಂಡು ಬರುತ್ತಿದೆ ಎಂದು ಆಂಧ್ರಪ್ರದೇಶ ಡಿಜಿಪಿ ಸುಹಾಂಗ್ ಮಾಧ್ಯಮಗಳಿಗೆ ತಿಳಿಸಿದ್ದಾರೆ. ವಿಷಾನಿಲ ಸೋರಿಕೆ ಬಗ್ಗೆ ನಮಗೆ ಮುಂಜಾನೆ 3.30 ರ ಸುಮಾರು ಮಾಹಿತಿ ಬಂದಿತ್ತು. ಸ್ಥಳಕ್ಕೆ ದೌಡಾಯಿಸಿ 5.30 ರ ಸುಮಾರು ಆ ಪ್ರದೇಶವನ್ನು ವಶಕ್ಕೆ ತೆಗೆದುಕೊಂಡು ಹೆಚ್ಚಿನ ಅನಾಹುತವನ್ನು ತಪ್ಪಿಸಿದ್ದೇವೆ ಎಂದು ಅವರು ಹೇಳಿದ್ದಾರೆ.